== ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ == ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಕೊಪ್ಪಳದ ಪೂರ್ವ ಬೆಟ್ಟದ ಮೇಲಿರುವ ಸುಮಾರು ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುನ್ನೇಡೆಯುತ್ತಿರುವ ಮಹಾಸಂಸ್ಥಾನ. ತ್ರಿವಿಧ ದಾಸೋಹದ (ಅನ್ನ, ಅರಿವು, ಆಧ್ಯಾತ್ಮ) ಗಂಗೋತ್ರಿ. ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠವು ಒಂದು. == ಜಾತ್ರೆ == ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತವಾಗಿರುವ ಜಾತ್ರ ಮಹೋತ್ಸವವು ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ. ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯು ಭಕ್ತರಲ್ಲಿ, ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸುತ್ತ ಜಾತ್ರೆಗೊಂದು ಹೊಸರೂಪ-ಹೊಸಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳ ಗಮನ ಸೆಳೆದಿದೆ. === ಚಾಲನೆ === ಪ್ರತಿ ವರ್ಷ ಪುಷ್ಯ ಬಹುಳ ಬಿದಿಗೆಯಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಆಚರಿಸಲ್ಪಡುತ್ತದೆ. ಸುಮಾರು ೪ ರಿಂದ ೮ ಲಕ್ಷ ಭಕ್ತಸಮೂಹವು ಈ ಉತ್ಸವಕ್ಕೆ ಸಾಕ್ಷಿಯಾಗಲು ರಾಜ್ಯ, ನೆರೆರಾಜ್ಯಗಳಿಂದ ಆಗಮಿಸುತ್ತದೆ. ಪ್ರತಿ ವರ್ಷವು ಬಸವ ಪಟ ಆರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸಂಪ್ರದಾಯದಂತೆ ಬನದ ಹುಣ್ಣಿಮೆಯದಿನ ಪಲ್ಲಕ್ಕಿ ಮಹೋತ್ಸವ ನೆರವೇರುತ್ತದೆ. ಅದೇ ದಿನ ರಥದ ಮೇಲಿನ ಕಳಸವನ್ನು ಹಲಗೇರಿ ಗ್ರಾಮದ ಭಕ್ತ ಲಿಂಗೈಕ್ಯ ಶ್ರೀ ವೀರನಗೌಡ ಲಿಂಗನಗೌಡ ಪಾಟೀಲರ ಮನೆಯಿಂದ ಬರಮಾಡಿಕೊಳ್ಳಲಾಗುತ್ತದೆ. === ಮೆರವಣಿಗೆ === ೧೧ ನೇ ಪೀಠಧೀಪತಿಗಳಾಗಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗವಿಮಠಕ್ಕೆ ಬರುವ ಮುನ್ನ ಮಂಗಾಳಪುರದ ಸಮೀಪದ ಊರಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದು, ಗವಿಮಠಕ್ಕೆ ಹೊರಟು ನಿಂತಾಗ ತಮ್ಮ ಜಡೆಯನ್ನು ಕತ್ತರಿಸಿ ಆ ಮನೆಯ ಗೌಡಸಾನಿಗೆ ನೀಡುತ್ತಾರೆ. ಸಂತಾನವಿಲ್ಲದ ಆ ಗೌಡ ದಂಪತಿಗಳು ಆ ಜಡೆಯನ್ನು ಪೂಜಿಸಿದ ಫಲವಾಗಿ ಒಂದು ಗಂಡು ಸಂತಾನವನ್ನು ಪಡೆಯುತ್ತಾರೆ. ಆ ಮಗುವಿಗೆ ಜಡೇಗೌಡನೆಂದು ಹೆಸರಿಡುತ್ತಾರೆ ಹೀಗೆ ಆ ಕುಟುಂಬವು ಜಡೆಗೌಡ್ರ ಮನೆತನವೆಂದು ಹೆಸರು ಪಡೆಯುತ್ತದೆ. ಈ ಹಿನ್ನಲೆಯಲ್ಲಿ ಮಠದಲ್ಲಿ ಪೂಜೆಗೊಂಡ ಶ್ರೀ ಗವಿಸಿದ್ದೇಶ್ವರರ ಮೂರ್ತಿಯನ್ನು ತಂದು ಜಡೆಗೌಡ್ರ ಮನೆಯಲ್ಲಿ ಮೂಹುರ್ತಗಳಿಸಿ ಪೂಜಿಸಲ್ಪಟ್ಟ ನಂತರ ಸಕಲ ವಾದ್ಯಗಳೊಂದಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ನೆಡೆದು ಗವಿಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ. === ಉಚ್ಛಾಯ === ಪ್ರತೀತಿಯಂತೆ, ಮಹಾರಥೋತ್ಸವವು ನಿರಾಂತಕವಾಗಿ, ನಿರ್ವಿಘ್ನತೆಯಿಂದ ಸಾಂಗವಗಿ ನೆಡೆಯಲೆಂದು ಮುನ್ನದಿನ ಲಘು ರಥೋತ್ಸವ ನೆರವೇರುತ್ತದೆ. ಈ ಲಘು ರಥೋತ್ಸವಕ್ಕೆ ಉಚ್ಛಾಯ ಎಂಬ ಹೆಸರಿದೆ. === ಜಾತ್ರೆಗೊಂದು ಹೊಸರೂಪ-ಹೊಸಮೆರುಗು === ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ನೆಡೆಯುತ್ತದೆ. ==== ೨೦೧೬ರಿಂದ ನೆಡೆದ ಜಾಗೃತಿ ಕಾರ್ಯಗಳ ವಿಷಯಗಳು ==== ೨೦೧೬ ರಲ್ಲಿ ಬಾಲ್ಯವಿವಾಹ ೨೦೧೭ ರಲ್ಲಿ ಜಲದೀಕ್ಷೆ ೨೦೧೮ ರಲ್ಲಿ ಸಶಕ್ತ ಮನ - ಸಂತ್ರಪ್ತ ಜೀವನ ೨೦೧೯ ರಲ್ಲಿ ಕೃಪಾದೃಷ್ಠಿ - ನೇತ್ರದಾನ ಜಾಗೃತಿ ೨೦೨೦ ರಲ್ಲಿ ಲಕ್ಷ ವೃಕ್ಸೋತ್ಸವ ೨೦೨೧ ರಲ್ಲಿ ಸರಳ ಜಾತ್ರೆ - ಸಮಾಜಮುಖಿ ಜಾತ್ರೆ ೨೦೨೨ ರಲ್ಲಿ ಅಡವಿಹಳ್ಳಿ ಗ್ರಾಮ ದತ್ತು, ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಊಳೆತ್ತುವುದು ೨೦೨೩ ರಲ್ಲಿ ಅಂಗಾಂಗ ದಾನ ಜಾಗೃತಿ === ಜಾತ್ರೆಯಲ್ಲಿ ದಾಸೋಹ === ೨೦೨೩ ರ ಮಹಾರಥೋತ್ಸವಕ್ಕೆ ೫-೬ ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿ ೪ ಲಕ್ಷ ಶೇಂಗಾ ಹೋಳಿಗೆ ಮತ್ತು ೨೭೫ ಕ್ವಿಂಟಾಲ್ ಮಾದಲಿಯನ್ನು ತಯಾರಿಸಲಾಗಿತ್ತು. ಜಾತ್ರೆಯ ವಿಶೇಷ ದಾಸೋಹಕ್ಕಾಗಿ ಸುತ್ತಮತ್ತಲಿನ ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ದವಸ-ಧಾನ್ಯ, ಹಣ, ರೊಟ್ಟಿ, ಮೊದಲಾದ ರೂಪದಲ್ಲಿ ದಾನ ಹರಿದುಬರುತ್ತದೆ. === ಗಂಗಾರತಿ === ೨೦೨೩ರ ಜಾತ್ರೆಯಲ್ಲಿ ಪ್ರಥಮ ಬಾರಿಗೆ ಗವಿಮಠದ ಪರಂಪರೆಯಲ್ಲಿ ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡುವ ಮೂಲಕ ಗಂಗಾರತಿ ನೇರವೆರಿದೆ. == ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ - ಪೀಠಾಧ್ಯಕ್ಷರ ಪಟ್ಟಿ == == ಭೂಪಟ == == ಉಲ್ಲೇಖಗಳು ==